ದಾಮಾಜಿ ಗಾಯಕವಾಡ್ -
 	ಬರೋಡದ ಗಾಯಕವಾಡ್ ರಾಜ ಮನೆತನದಲ್ಲಿ ಈ ಹೆಸರಿನವರು ಇಬ್ಬರು ಇದ್ದಾರೆ. 1ನೆಯ ದಾಮಾಜಿ ಈ ವಂಶದ ಮೂಲ ಪುರುಷರಲ್ಲೊಬ್ಬ. ಇನ್ನೊಬ್ಬ ಝಿಂಗೋಜಿ. ಝಿಂಗೋಜಿಯ ಅನಂತರ ಬಂದ ಪಿಲಾಜಿ ಗಾಯಕವಾಡನ ಮಗ 2ನೆಯ ದಾಮಾಜಿ. ಇವನು ಗುಜರಾತಿನ ಮರಾಠಾ ರಾಜ್ಯದ ಅಧಿಪತಿಯಾಗಿದ್ದ ಸೇನಾಪತಿ ತ್ರಿಂಬಕರಾವ್ ಧಾಬಡೆಯ ಅನುಯಾಯಿಯಾಗಿದ್ದ. 1731ರಲ್ಲಿ ನಡೆದ ಬಿಲ್ಹಾಪುರ್ ಕದನದಲ್ಲಿ ತ್ರಿಂಬಕರಾವ್ ಮೃತಿಹೊಂದಿದ. ಪೇಶ್ವೆ 1ನೆಯ ಬಾಜಿರಾಯನಿಗೆ ಜಯವಾಯಿತು. ಆ ಕದನದಲ್ಲಿ ದಾಮಾಜಿ ಗಾಯಕವಾಡ ಪ್ರದರ್ಶಿಸಿದ ವಿಶೇಷ ಶೌರ್ಯವನ್ನು 1ನೆಯ ಬಾಜಿರಾಯ ಮೆಚ್ಚಿಕೊಂಡು ಇವನನ್ನು ತನ್ನ ಸೇವೆಗೆ ತೆಗೆದುಕೊಂಡು, ಅನಂತರ ಇವನನ್ನು ಗುಜರಾತಿನಲ್ಲಿ ತನ್ನ ಪ್ರತಿನಿಧಿಯಾಗಿ ನೇಮಿಸಿದ. ದಾಮಾಜಿ ಕ್ರಮೇಣ ಪ್ರಬಲನಾದ. ಬಡೋದೆಯಲ್ಲಿ ಗಾಯಕವಾಡ್ ವಂಶದ ಆಡಳಿತ ಸ್ಥಾಪಿಸಿದ. 1ನೆಯ ಬಾಜಿರಾಯನ ಅನಂತರ ಬಂದ ಪೇಶ್ವೆ ಬಾಲಾಜಿ ಬಾಜಿರಾಯನ ಕಾಲದಲ್ಲೂ ಅವನಿಗೆ ಸಾಮಂತನಾಗಿ ಮುಂದುವರಿದ. 1736ರಲ್ಲಿ ಸೇನಾ ಖಾಸ್ ಖೇಲ್ ಎಂಬ ಬಿರುದು ಪಡೆದ. ಪೇಶ್ವೆಯ ವಿರುದ್ಧವಾಗಿ ತಾರಾಬಾಯಿಗೆ ನೆರವು ನೀಡಲು 15,000 ಸೈನಿಕರೊಡನೆ ಸಾತಾರಕ್ಕೆ ಹೊರಟ. 1751ರಲ್ಲಿ ಏಪ್ರಿಲ್ 30ರಂದು ಸಾತಾರದ ಬಳಿ ನಡೆದ ಕದನದಲ್ಲಿ ದಾಮಾಜಿಗೆ ಸೋಲಾಯಿತು. 1752ರಲ್ಲಿ ಆದ ಕೌಲಿನ ಪ್ರಕಾರ ಗುಜರಾತಿನ ಮೇಲೆ ಧಾಬಡೆಯರ ಹಕ್ಕು ಇಲ್ಲದಂತಾಯಿತು. ಗುಜರಾತಿನ ಅರ್ಧಭಾಗವನ್ನು ಪೇಶ್ವೆ ಪಡೆದುಕೊಂಡ. ದಾಮಾಜಿ 15 ಲಕ್ಷ ರೂಪಾಯಿಗಳನ್ನು ಯುದ್ಧ ನಷ್ಟವಾಗಿ ತೆರಬೇಕಾಯಿತು. ದಾಮಾಜಿ ಗುಜರಾತಿನಲ್ಲಿ ಮರಾಠರ ಏಕೈಕ ಪ್ರತಿನಿಧಿಯಾಗಿ ಮುಂದುವರಿದನಲ್ಲದೆ, ಪೇಶ್ವೆಗಳಿಗೆ ಅಗತ್ಯವಾದಾಗ ನೆರವು ನೀಡಲು ಒಪ್ಪಿದ. ಇವನು ತನ್ನ ಅಧಿಕಾರವನ್ನು ಗುಜರಾತ್ ಕಾಠಿಯಾವಾಡಗಳಲ್ಲಿ ಸುಭದ್ರಗೊಳಿಸಿದ. 3ನೆಯ ಪಾಣಿಪಟ್ ಯುದ್ಧದಲ್ಲಿ (1761) ಇವನೂ ಭಾಗವಹಿಸಿದ. ಈ ಯುದ್ಧದಲ್ಲಿ ಜೀವಸಹಿತ ಹೇಗೋ ಪಾರಾದ. 1768ರ ಆಗಸ್ಟ್ 18ರಂದು ಬರೋಡದಲ್ಲಿ ಮರಣ ಹೊಂದಿದ. ಇವನಿಗೆ ಗೋವಿಂದರಾವ್, ಸಯಾಜಿರಾವ್, ಫತೆ ಸಿನ್ಹ ಮತ್ತು ಮಾನಾಜಿ ಎಂಬ ನಾಲ್ವರು ಗಂಡು ಮಕ್ಕಳಿದ್ದರು. ದಾಮಾಜಿಯ ಅನಂತರ ಗೋವಿಂದರಾವ್ ಅಧಿಕಾರಕ್ಕೆ ಬಂದ.
(ಎನ್.ಎ.ಎಚ್.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ